ಮಂಗರವಳ್ಳಿ
	ವೈಟೇಸೀ ಕುಟುಂಬಕ್ಕೆ ಸೇರಿದ ಕಾಡುಬಳ್ಳಿ. ಸಿಸಸ್ ಕ್ವಾಡ್ರಾಂಗ್ಯುಲೇರಿಸ್ ಇದರ ಸಸ್ಯ ವೈe್ಞÁನಿಕ ಹೆಸರು. ಭಾರತಾದ್ಯಂತ ಕಾಣದೊರೆಯುತ್ತದೆ. ಬೇಲಿಗಳ ಮತ್ತು ಪೊದರುಗಳ ಮೇಲೆ ಬಲುಸಾಮಾನ್ಯ. ತನ್ನ ತಂತುಕುಡಿಗಳ ನೆರವಿನಿಂದ ಬೇರೆ ಸಸ್ಯಗಳ ಮೇಲೆ ಹಬ್ಬಿ ಬೆಳೆಯುತ್ತದೆ. 

	ನಾಲ್ಕು ಮೂಲೆಗಳ ಹಸುರು ಬಣ್ಣದ ಕಾಂಡ ಇದರ ಲಕ್ಷಣ. ಮೇಲ್ಮೈ ನಯವಾಗಿದೆ, ರೋಮವಿಲ್ಲ. ಎಲೆಗಳು ಸರಳ, ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ. ಎಲೆಯಂಚು ದಂತಿತ. ಪ್ರತಿಯೊಂದು ಎಲೆಗೆ ಅಭಿಮುಖವಾಗಿ ತಂತುಕುಡಿಯುಂಟು. ವಾಸ್ತವವಾಗಿ ತಂತುಕುಡಿ ಪರಿವರ್ತಿತ ತುದಿಮೊಗ್ಗು. ಬೆಳೆವಣಿಗೆಯ ಕಾಲದಲ್ಲಿ ಕಾಂಡದ ತುದಿಮೊಗ್ಗು ಒಂದು ಗೆಣ್ಣಿನಷ್ಟು ಉದ್ದಕ್ಕೆ ಬೆಳೆದು ತುದಿಯಲ್ಲಿ ಒಂದು ಎಲೆಯನ್ನು ಉತ್ಪಾದಿಸಿ ತಂತುಕುಡಿಯಾಗಿ ಮಾರ್ಪಾಟಾಗುತ್ತದೆ. ತರುವಾಯ ಎಲೆಯ ಕಕ್ಷದಲ್ಲಿರುವ ದ್ವಿತೀಯಕ ಮೊಗ್ಗು ತುದಿಮೊಗ್ಗಿನ ಕಾರ್ಯವಹಿಸಿಕೊಂಡು ಮತ್ತೆ ಒಂದು ಗೆಣ್ಣಿನಷ್ಟು ಬೆಳೆದು, ಮತ್ತೊಂದು ಎಲೆ ಉತ್ಪಾದಿಸಿ ತಂತುಕುಡಿಯಾಗುತ್ತದೆ. ಈ ತೆರನಾಗಿ ಬೆಳೆವಣಿಗೆ ಮುಂದುವರಿಯುತ್ತ ಹೋಗುತ್ತದೆ. ಇಂಥ ಬೆಳೆವಣಿಗೆಗೆ ಸಿಂಪೋಡಿಯಲ್ ರೀತಿ ಎಂದು ಹೆಸರು. ಇದರಿಂದಾಗಿ ಇಡೀ ಬಳ್ಳಿ ಸೊಟ್ಟಂಬಟ್ಟವಾಗಿ ಬೆಳೆಯುತ್ತದೆ. ಹೂಗಳು ದ್ವಿಲಿಂಗಗಳು, ಅನಾಕರ್ಷಕ ಹಳದಿ ಬಣ್ಣದವು. ಸೈಮೋಸ್ ರೀತಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಪ್ರತಿಯೊಂದು ಹೂವಿನಲ್ಲಿ 4 ಪತ್ರಗಳು, 4 ದಳಗಳು, 4 ಕೇಸರಗಳು, ಎರಡು ಕಾರ್ಪೆಲುಗಳ ಉಚ್ಚ ಅಂಡಾಶಯ ಇವೆ. ಫಲ ಬೆರಿ ಮಾದರಿಯದು. 

	ಮಂಗರವಳ್ಳಿಯ ಎಲೆ ಮತ್ತು ಕಾಂಡಗಳನ್ನು ತರಕಾರಿಯಾಗಿ ಬಳಸುವುದಿದೆ. ಕಾಂಡ ಹಾಗೂ ಬೇರಿಗೆ ಔಷಧೀಯ ಮಹತ್ತ್ವವೂ ಉಂಟು. ಕಾಂಡದ ಪುಡಿ ಜೀರ್ಣಕಾರಿ, ಅಲ್ಲದೆ ಇದನ್ನು ವಿವಿಧ ಬಗೆಯ ಗಾಯಗಳ ಚಿಕಿತ್ಸೆಗೆ ಬಳಸುವುದಿದೆ. ಬೇರಿನ ಪುಡಿ ಮೂಳೆ ಗಾಯಗಳಿಗೆ ಮದ್ದು. ಕಾಂಡವನ್ನು ಅರೆದು ತಯಾರಿಸಲಾಗುವ ಲೇಪ ಉಬ್ಬಸಕ್ಕೆ ಒಳ್ಳೆಯ ಔಷಧಿ ಎನಿಸಿದೆ.												
(ಟಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ